ಜನಪದ ಆಶಯಗಳು

ವಾಸ್ತವ ಪ್ರಪಂಚಕ್ಕಿಂತ ಭಿನ್ನವಾದ ವಿಶೇಷ ನಂಬಿಕೆಗಳನ್ನು ಆಶಯಗಳೆನ್ನುತ್ತಾರೆ. ಜನಪದ ಕಥೆಗಳು, ಐತಿಹ್ಯಗಳು, ಕಥಾಲಾವಣಿಗಳು ಮತ್ತು ಪುರಾಣಗಳನ್ನು ಕುರಿತಂತೆ ಆಶಯಗಳನ್ನು ವಿಶ್ಲೇಷಿಸಿ ಅಧ್ಯಯನ ಮಾಡಿದ್ದಾರೆ. ಜನಪದಕ್ಕೆ ಸಂಬಂಧಿಸಿದ ಆಶಯಗಳನ್ನು ವಿಶ್ಲೇಷಿಸಿ ಅಧ್ಯಯನ ಮಾಡಿದ್ದಾರೆ. ಜನಪದಕ್ಕೆ ಸಂಬಂಧಿಸಿದ ಆಶಯಗಳು (ಫೋಕ್ ಮೋಟಿಫ್ಸ್) ಕೆಲವು ಸಾರಿ ತೀರ ಸರಳ ನಂಬಿಕೆಗಳಾಗಿದ್ದು, ಸಾಂಪ್ರದಾಯಿಕ ಕಥೆಗಳಲ್ಲಿ ಉದ್ದಕ್ಕೂ ಕಂಡುಬರುವುದುಂಟು. ಸಾಮಾನ್ಯವಾಗಿ ಇಂಥ ಆಶಯಗಳು ಅಸಾಮಾನ್ಯಜೀವಿಗಳಾದ ಕಿನ್ನರಿಯರು, ಮಾಟಗಾತಿಯರು, ಮನುಷ್ಯರನ್ನು ತಿನ್ನುವ ರಾಕ್ಷಸರು, ಕ್ರೂರ ಮಲತಾಯಂದಿರು, ಮಾತಾಡುವ ಪ್ರಾಣಿಗಳು-ಮುಂತಾದುವುಗಳಿಂದ ನೆರವೇರುತ್ತವೆ. ಅಸಾಮಾನ್ಯ ಭೌತಿಕ ಪರಿಸರದಿಂದ ಕೂಡಿದ ಅದ್ಭುತ ಪ್ರಪಂಚ, ಮಾಟಗಾರರ ಪ್ರಪಂಚ ಮೊದಲಾದವು ಈ ಆಶಯಗಳ ಕೇಂದ್ರಬಿಂದುಗಳಾಗಿರುತ್ತದೆ.
ಜನತೆಯನ್ನು ರಂಜಿಸಬಲ್ಲ ಸರಳವಾದ ಯಾವುದೇ ಒಂದು ಚಿಕ್ಕ ಕಥೆ ಕೂಡ ಆಶಯವಾಗಬಹುದು. ಹಾಗೆ ನೋಡಿದರೆ ಜನಪದಸಾಹಿತ್ಯದ ಒಂದು ಅಂಶದ ಕನಿಷ್ಠ ಘಟಕವೇ ಆಶಯ. ಇಂಥ ಆಶಯ ಓದುಗರ ಮೇಲೆ ನೇರ ಪರಿಣಾಮ ಬೀರಿ ಆಕರ್ಷಿಸುವಂತಿರಬೇಕು. ಸಾಂಪ್ರದಾಯಿಕ ಕಥೆಗಳಲ್ಲಿ ಬರುವ ಆಶಯಗಳು ನೆನಪಿನಲ್ಲಿಡಲು ಮತ್ತು ಪುನರಾವೃತ್ತಿಗೊಳ್ಳಲು ಸಾಧ್ಯವಾಗಿರುವಂಥ ವಿಶೇಷ ರೀತಿಯ ಬೇರೇನಾದರೂ ಅಂಶಗಳನ್ನು ಹೊಂದಿರಬೇಕು.

ಒಂದು ಕಥೆಯ ಮೂಲಕ ಆಶಯದ ಸಾಮಾನ್ಯ ಸ್ವರೂಪವನ್ನು ಗುರುತಿಸಬಹುದು. ಒಬ್ಬ ರಾಜ ಯುದ್ಧಕ್ಕೆ ಹೋಗಿ ಹನ್ನೆರಡು ವರ್ಷಗಳ ಅನಂತರ ಹಿಂತಿರುಗಿ ಬಂದಾಗ ತನ್ನ ಮಗಳನ್ನೇ ಮೋಹಿಸುತ್ತಾನೆ. ಇದನ್ನು ಕಂಡು ಹೆದರಿದ ಆತನ ರಾಣಿ ತನ್ನ ಮಗಳನ್ನು ಒಂದು ಕಂಚಿನ ತೇರಿನಲ್ಲಿ ಕೂರಿಸಿ, ಶಾಪಹಾಕಿ ಕಾಡಿಗೆ ಕಳಿಸುತ್ತಾಳೆ. ಕಾಡಿನಲ್ಲಿ ಆ ರಾಜಕುಮಾರಿ ಒಬ್ಬ ಅಗಸನನ್ನು ಬಟ್ಟೆ ಒಗೆಯಲು ನೇಮಿಸಿಕೊಳ್ಳುತ್ತಾಳೆ. ಒಗೆದು ಹರವಿದ್ದ ರಾಜಕುಮಾರಿಯ ಸೀರೆಯನ್ನು ನೋಡಿ ಇನ್ನೊಬ್ಬ ರಾಜಕುಮಾರ ಅವಳನ್ನು ಮೋಹಿಸುತ್ತಾನೆ. ಆತ ಗಜನಿಂಬೆಯ ಹಣ್ಣಾಗಿ ಮಾರ್ಪಟ್ಟು ಆಕೆಯ ಸೀರೆಯಲ್ಲಿ ಸೇರಿ, ಮತ್ತೆ ರಾಜಕುಮಾರ ನಿಜರೂಪ ತಾಳಿ ಅವಳನ್ನು ಮದುವೆಯಾಗುತ್ತಾನೆ. ಆಮೇಲೆ ರಾಜಕುಮಾರ ಒಬ್ಬ ಸೂಳೆಯ ಜೊತೆ ಹೋಗುತ್ತಾನೆ. ಆಗ ರಾಜಕುಮಾರಿಗೆ ಕಷ್ಟ ಕೊಡಲು ಇಬ್ಬರು ರಾಕ್ಷಸಿಯರು ಬರುತ್ತಾರೆ. ರಾಜಕುಮಾರಿ ಉಪಾಯದಿಂದ ಅವರನ್ನು ಗೆಲ್ಲುತ್ತಾಳೆ. ಅನಂತರ ಒಂದು ಕೋತಿ ಆ ರಾಜಕುಮಾರಿಯ ನೆರವಿಗೆ ಬರುತ್ತದೆ. ಕೋತಿ ರಾಜಕುಮಾರನನ್ನು ಹುಡುಕಲು ಹೊರಡುತ್ತದೆ. ರಾಜ ಸೂಳೆಯ ಮನೆಯಲ್ಲಿ ಪಗಡೆ ಆಡುವದನ್ನು ಕೋತಿ ನೋಡುತ್ತದೆ. ಆ ಹೊತ್ತಿನಲ್ಲಿ ರಾಜ-ಸೂಳೆಯರ ನಡುವೆ ಮಾತು ಬಂದು ಇಬ್ಬರೂ ಕಂಚಿನ ತೇರಿನ ಕಡೆ ಹೊರಡುತ್ತಾರೆ. ರಾಜಕುಮಾರಿ ರಾಜಕುಮಾರ ಒಂದಾಗುತ್ತಾರೆ. ಕಾರಣಾಂತರದಿಂದ, ರಾಜಕುಮಾರಿಯಿಂದ ತಿರಸ್ಕøತವಾದ ಕೋತಿ ದುಃಖದಿಂದ ಹೊರಟು ಹೋಗುತ್ತದೆ.

ಈ ಕಥೆಯಲ್ಲಿ ರಾಜ ಮಗಳನ್ನು ಮೋಹಿಸುವುದು, ಕಂಚಿನ ತೇರು, ತಾಯಿ ಹಾಕುವ ಶಾಪ, ರಾಜಕುಮಾರ ಗಜನಿಂಬೆಯ ಹಣ್ಣಾಗಿ ಪರಿವರ್ತನೆಯಾಗುವುದು, ರಾಕ್ಷಸಿಯರು ಮತ್ತು ರಾಜಕುಮಾರಿಯ ನೆರವಿಗೆ ಬರುವ ಕೋತಿ-ಹೀಗೆ ಸುಮಾರು ಆರು ಆಶಯಗಳು ಕಂಡುಬರುತ್ತವೆ. ಇವೆಲ್ಲ ವಾಸ್ತವ ಪ್ರಪಂಚಕ್ಕಿಂತ ಭಿನ್ನವಾದ ಸಂದರ್ಭಗಳು. ಕಥೆಯಲ್ಲಿ ಬರುವ ವಾತಾವರಣ ವಿಶೇಷ ಬಗೆಯದು. ಮಾಯವಾಗುವುದು. ಶಾಪ, ನಿಜರೂಪ ತಾಳುವುದು, ಮಾತಾಡುವ ಕೋತಿ, ರಾಕ್ಷಸರು, ಕಂಚಿನ ತೇರು-ಇವು ನಿತ್ಯಜೀವನದಲ್ಲಿ ಸಾಮಾನ್ಯವಾಗಿ ಕಾಣಲಾರದಂಥವು. ಹೀಗೆ ಸಹಜತೆಗಿಂತ ಭಿನ್ನವಾದ ಸಂದರ್ಭಗಳೂ ಮತ್ತು ವಿಶೇಷವಾದ ನಂಬಿಕೆಗಳೂ ಆಶಯಗಳೆನಿಸಿಕೊಳ್ಳುತ್ತವೆ.

ಜನಪದ ಕಥೆಗಳನ್ನು ಅಭ್ಯಾಸಮಾಡುವ ವಿದ್ಯಾರ್ಥಿಗಳಿಗೆ, ಮಾನ ಸಂಸ್ಕøತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತರಾಷ್ಟ್ರೀಯ ಸಂಬಂಧವನ್ನು ಕಂಡುಕೊಳ್ಳಲು ಆಶಯಗಳು ಸಹಾಯಕವಾಗುತ್ತವೆ. ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ತರ್ಕಬದ್ಧವಾಗಿ ಆಶಯಗಳು ಹುಟ್ಟಿಕೊಂಡಿರುವುದೂ ಉಂಟು. ಇನ್ನು ಕೆಲವು ಸಾರಿ ಒಂದೇ ಸಾಮಾನ್ಯ ಮೂಲದಿಂದ ಆಶಯಗಳು ಹುಟ್ಟಿಕೊಂಡು ಒಬ್ಬರಿಂದ ಒಬ್ಬರಿಗೆ, ದೇಶದಿಂದ ದೇಶಕ್ಕೆ ಕೊಡುಗೆಯಾಗಿ ಬಂದಿರುವ ಸಂದರ್ಭಗಳೂ ಇವೆ. ಜನಪದ ಕಥೆಗಳನ್ನು ಕುರಿತು ಅಭ್ಯಾಸ ಮಾಡುವವರು ಅವನ್ನು ಕಥಾವರ್ಗಗಳಾಗಿ ವಿಭಾಗಿಸಿ ನೋಡುವುದಕ್ಕಿಂತ ಆಶಯಗಳಿಗೆ ಅನುಗುಣವಾಗಿ ವಿಂಗಡಿಸಿ ಅಭ್ಯಾಸಮಾಡುವುದು ಹೆಚ್ಚು ಉಪಯುಕ್ತ. ಇಂಥ ಆಶಯಗಳ ಆಳವಾದ ಅಭ್ಯಾಸ ಮಾನವನ ಪ್ರಾಗಿತಿಹಾಸವನ್ನು ಕುರಿತು ಹೆಚ್ಚು ವಿವರ ಒದಗಿಸಬಲ್ಲುದಾಗಿದೆ. ಜನತೆಗೆ ಮತಧರ್ಮಗಳಲ್ಲಿರುವ ನಂಬಿಕೆಗಳು, ಆಚರಣೆಗಳ ಮರ್ಮ, ಮಾನವನ ಆಶೋತ್ತರಗಳು, ಜೀವನ ಸಾವುಗಳ ಬಗ್ಗೆ, ಪುನರ್ಜನ್ಮಾದಿಗಳ ಬಗ್ಗೆ ಅವರಿಗಿರುವ ನಂಬಿಕೆಗಳು, ದೇವರು, ಸ್ವರ್ಗ ನರಕಗಳ ಬಗೆಗಿನ ಅವನ ಅಭಿಪ್ರಾಯಗಳು, ಹೆದರಿಕೆ, ವಿಶ್ವಾಸಗಳು, ದುಷ್ಟಶಿಕ್ಷಣ, ಶಿಷ್ಟರಕ್ಷಣಗಳ ವಿಚಾರದಲ್ಲಿ ಅವನ ಧೋರಣೆಗಳು-ಹೀಗೆ ಅನೇಕ ವಿಷಯಗಳ ಬಗ್ಗೆ ಜನಪದ ಆಶಯಗಳು ಬೆಳಕು ಬೀರಬಲ್ಲವು.								(ಎಚ್.ಆರ್.ಡಿ.ಒ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ